ಪ್ಲಿಮತ್
ಈ ಹೆಸರಿನ ಪಟ್ಟಣಗಳು ಹಲವಾರಿವೆ. ಪ್ರಮುಖವಾದವನ್ನು ಇಲ್ಲಿ ಕೊಟ್ಟಿದೆ. ನೈಋತ್ಯ ಇಂಗ್ಲೆಂಡಿನ ಡೆವನ್ ಕೌಂಟಿಯಲ್ಲಿ ಪ್ಲಿಮ್ ಮತ್ತು ಟಮರ್ ನದೀಮುಖಜಭೂಮಿಗಳ ನಡುವೆ ಪ್ಲಿಮತ್ ಜಲಸಂಧಿಯ ಮೇಲೆ ಇರುವ ರೇವುಪಟ್ಟಣ, ನೌಕಾನೆಲೆ, ಲಂಡನ್ನಿಗೆ ಪಶ್ಚಿಮ ನೈಋತ್ಯದಲ್ಲಿ 304 ಕಿಮೀ. ದೂರದಲ್ಲಿ ಉ.ಅ. 50023' ಮತ್ತು ಪ.ರೇ. 4010' ಮೇಲೆ ಇದೆ. ಜನಸಂಖ್ಯೆ 2,39,314 (1971). ಇದು 1888ರಲ್ಲಿ ಪಾರ್ಲಿಮೆಂಟರಿ ಬರೊ ಮತ್ತು 1928ರಲ್ಲಿ ನಗರವಾಗಿ ಮಾನ್ಯತೆ ಪಡೆಯಿತು. ಪ್ರಮುಖ ಕೈಗಾರಿಕೆಗಳು ಯಂತ್ರೋಪಕರಣ, ರೇಡಿಯೋ, ದೂರದರ್ಶನ, ರಾಸಾಯನಿಕ, ಲ್ಯೂಬ್ರಿಕೇಷನ್ ಉಪಕರಣ, ರಸಗೊಬ್ಬರ ಮತ್ತು ಪಾದರಕ್ಷೆ ತಯಾರಿಕೆ.

	ಜಯಶಾಲಿಯಾದ 1ನೆಯ ಮಿಲಿಯಮ್ ದೊರೆಯ ಆಜ್ಞೆಯಂತೆ ಮಾಡಲಾದ ಭೂ ಸಮೀಕ್ಷೆಯ ವಿವರಗಳನ್ನೊಳಗೊಂಡ ಡೂಮ್ಸ್‍ಡೇ ಬುಕ್‍ನಲ್ಲಿ (1080) ಸಡ್‍ಟೋನ್ ಎಂದು ಕರೆಯಲಾಗಿರುವ ಪ್ಲಿಮತ್‍ನ ಮೂಲಬಂದರನ್ನು ಈಗಲೂ ಸಟ್ಟನ್ ಬಂದರೆಂದೇ ಕರೆಯಲಾಗುತ್ತದೆ. ಇಲ್ಲಿಂದ ಫ್ರಾನ್ಸಿಗೆ ಸೈನ್ಯದ ರವಾನೆಯಾಗುತ್ತಿತ್ತು. ಇದು ವ್ಯಾಪಾರದಲ್ಲೂ ಪ್ರಮುಖ ಪಾತ್ರ ವಹಿಸತೊಡಗಿತು. ಇದರಿಂದ ಈ ಪಟ್ಟಣ ಬಹು ಬೇಗ ಅಭಿವೃದ್ಧಿ ಹೊಂದಿತು. ಇದರ ದಕ್ಷಿಣದ ತೀರ ಪ್ರದೇಶವಾದ ಹೋನಲ್ಲಿ 1660-85ರಲ್ಲಿ ಆಳಿದ ಎರಡನೆಯ ಚಾಲ್ರ್ಸ್ ದೊರೆ ಕಟ್ಟಿಸಿದ ದರ್ಗವಿದೆ. 1690ರಲ್ಲಿ ಟಮರ್ ನದಿಯ ಪೂರ್ವದಡದಲ್ಲಿ ರಾಯಲ್ ಹಡಗುಕಟ್ಟೆಯನ್ನು ಕಟ್ಟಲು ಪ್ರಾರಂಭಿಸಲಾಯಿತು. ಮೂರನೆಯ ಪಟ್ಟಣವಾದ ಸ್ಟೋನ್‍ಹೌಸ್ ಡೆವನ್‍ಪೋರ್ಟ್ ಮತ್ತು ಪ್ಲಿಮತ್‍ಗಳ ನಡುವೆ ಹುಟ್ಟಿತು. ಈ ಮೂರು ಪಟ್ಟಣಗಳ ಏಕೀಕರಣದಿಂದ 1914ರಲ್ಲಿ ಈಗಿನ ಪ್ಲಿಮತ್ ನಗರ ರೂಪುಗೊಂಡಿತು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ಪ್ಲಿಮತ್ ನಗರ ತೀವ್ರವಾದ ಬಾಂಬು ದಾಳಿಗೆ ತುತ್ತಾಗಿ ಅಪಾರ ನಷ್ಟಕ್ಕೊಳಗಾಯಿತು. ಇದರಲ್ಲಿ 1,100ಕ್ಕೂ ಹೆಚ್ಚು ಜನರು ಮೃತಪಟ್ಟು ಎಲ್ಲ ದೊಡ್ಡ ಸಾರ್ವಜನಿಕ ಕಟ್ಟಡಗಳೂ ಅರ್ಧಕ್ಕೂ ಹೆಚ್ಚು ಶಾಲೆಗಳೂ ನಾಶವಾದುವು. ಈಗ ಪುನರ್ನಿರ್ಮಿತವಾದ ಹೊಸ ಪ್ಲಿಮತ್ ನಗರದಲ್ಲಿ ಬ್ರಿಟನ್ನಿನಲ್ಲೇ ಅತ್ಯಂತ ಆಧುನಿಕ ವ್ಯಾಪಾರಕೇಂದ್ರ ಮತ್ತು ಪುರಭವನ ಇವೆ. 1962ರಲ್ಲಿ ಎಲಿಜûಬೆತ್ ರಾಣಿಯಿಂದ 14 ಅಂತಸ್ತುಗಳ ಪುರಭವನದ ಉದ್ಘಾಟನೆಯೊಂದಿಗೆ ನಗರದ ಪುನರ್ನಿರ್ಮಾಣಕಾರ್ಯ ಸಂಪೂರ್ಣವಾಯಿತು. ಇಲ್ಲಿಯ ಕಟ್ಟಡಗಳಲ್ಲಿ ಪ್ರಮುಖವಾದವು ಸೇಂಟ್ ಆಂಡ್ರ್ಯೂ ಚರ್ಚ್, ಪುರಭಾವನ ಮತ್ತು ಕೇಂದ್ರ ಸಾರ್ವಜನಿಕ ಗ್ರಂಥಾಲಯ. ಇಲ್ಲಿ ಅನೇಕ ವಸ್ತುಸಂಗ್ರಹಾಲಯಗಳು, ಕಲಾಶಾಲೆಗಳು, ತಾಂತ್ರಿಕ ಕಾಲೇಜು, ರಾಯಲ್ ನೌಕಾ ಎಂಜನಿಯರಿಂಗ್ ಕಾಲೇಜು, ದೂರದರ್ಶನ ಕೇಂದ್ರ ಮತ್ತು ಉದ್ಯಾನಗಳು ಇವೆ.

	2 ಅಮೆರಿಕ ಸಂಯುಕ್ತ ಸಂಸ್ಥಾನದ ಇಂಡಿಯಾನ ರಾಜ್ಯದ ಒಂದು ನಗರ ಮತ್ತು ಮಾರ್ಷಲ್ ಕೌಂಟಿಯ ಮುಖ್ಯ ಪಟ್ಟಣಕ್ಕೆ ಪ್ಲಿಮತ್ ಎಂಬ ಹೆಸರಿದೆ. ಉ.ಅ. 41021' ಮತ್ತು ಪ.ರೇ. 86019' ಮೇಲೆ ಇದೆ. ಜನಸಂಖ್ಯೆ 7,661 (1970). ಇದು 1872ರಲ್ಲಿ ನಗರವಾಗಿ ಮಾನ್ಯತೆ ಪಡೆಯಿತು.

	3 ಅಮೆರಿಕ ಸಂಯುಕ್ತ ಸಂಸ್ಥಾನಗಳ ಮ್ಯಾಸಚೂಸೆಟ್ಸ್ ರಾಜ್ಯದ ಆಗ್ನೇಯ ಭಾಗದಲ್ಲಿರುವ ಪ್ಲಿಮತ್ ಕೌಂಟಿಯ ಒಂದು ಮುಖ್ಯ ಪಟ್ಟಣ. ಪ್ಲಿಮತ್ ಕೊಲ್ಲಿಯ ದಡದಲ್ಲಿ ಉ.ಅ. 41058' ಮತ್ತು ಪ.ರೇ. 70041' ಮೇಲೆ ಇದೆ. ಜನಸಂಖ್ಯೆ 18,606(1970). ಸಮುದ್ರ ತೀರದಲ್ಲಿರುವುದರಿಂದ ಇದು ಬೇಸಗೆಯ ಜನಪ್ರಿಯ ವಿಹಾರಸ್ಥಳ.

	4 ಈ ಹೆಸರಿನ ಇನ್ನೂ ಕೆಲವು ಸ್ಥಳಗಳಿವೆ. 
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ